Sunday, September 2, 2007

ತಿರುವಣ್ಣಾಮಲೈಗೆ ಹೋಗಿ ಬನ್ನಿ!

ಬೆಂಗಳೂರಿಗರ ವೀಕೆಂಡ್ ಟೈಮ್ ಪಾಸ್ ಗೆ ಒಂದು ಐಡಿಯಾ! " ತಿರುವಣ್ಣಾಮಲೈ"

ಇದೇನು? ಇದೆಲ್ಲಿದೆ? ಅಂತಾ ನೀವೇನಾದ್ರೂ ಕೇಳಿದ್ರೆ ನೀವು ಖಂಡಿತಾ ಅಪ್ಪಟ ಬೆಂಗಳೂರಿಗರಲ್ಲ! ನಿಮ್ಮ ಅಕ್ಕಪಕ್ಕದ "ಅಂಗೆ ಪೋರೆ" "ಇಪ್ಪೆ ವರೆ" ಎಂದು ಬಡಬಡಿಸುವ ಅಣ್ಣಾಮಲೈ ಮಂದಿಗಳೆಲ್ಲಾ ಪ್ರಾಯಶ: ಈ ಊರಿನವರೇ! ಬೆಂಗಳೂರನ್ನು "ಕಾಸ್ಮೋಪಾಲಿಟನ್" ಮಾಡಲು ಈ ಊರಷ್ಟು ಬೇರೇ ಯಾವೂರೂ ಸಹ ಬಹುಶ: ಕೊಡುಗೆ ನೀಡಿರ್ಲಾರ್ದು. ಇದು ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ. ದೂರದಲ್ಲಿ, ಬೆಂಗಳೂರು-ಪುದುಚೇರಿ ಹೆದ್ದಾರಿಯಲ್ಲಿದೆ.

ಏನಪ್ಪಾ ಇಲ್ಲಿಯ ವಿಶೇಷ ಅಂದ್ರೆ, ತಮಿಳ್ನಾಡಿಗೇ ೨ನೇ ಅತಿ ದೊಡ್ದ ದೇವಸ್ಥಾನ ಈ ಊರಲ್ಲಿದೆ. ದೇವ್ರ ಹೆಸರು "ಅಣ್ನಾಮಲೈ" ಅಂತ. ಈತನಿಗೆ "ಅರುಣಾಚಲ" ಬೆಟ್ಟದ ತಪ್ಪಲಿನಲ್ಲಿ ಬ್ರಹ್ಮಾಂಡವಾದ ದೇವಸ್ಥಾನಾನ ಕಟ್ಸಿದಾರೆ. "ಅರುಣಾಚಲೇಶ್ವರ" ಅಂದ್ರೂ ಇದೇ ದೇವ್ರೇ. ಇದೇ ಹೆಸ್ರಲ್ಲಿ ರಜನೀಕಾಂತ ಅನ್ನಿಸ್ಕೊಂಡಿರೋ ಮಾಜಿ ಕನ್ನಡಿಗ ಒಬ್ಬ ಒಂದ್ ಸೂಪರ್ ಡೂಪರ್ ಹಿಟ್ ಪಿಚ್ಚರ್ ಮಾಡ್ದ! ಒಟ್ನಲ್ಲಿ ಪವರ್ ಫುಲ್ ದೇವ್ರು. ಈ ದೇವಸ್ಥಾನ "ಚೋಳ" ಶೈಲಿಯಲ್ಲಿದೆ. ತಿರುವಣ್ಣಾಮಲೈ "ಪಂಚಭೂತ ಕ್ಷೇತ್ರ"ಗಳಲ್ಲಿ ಒಂದು. ಅಂದ್ರೆ "ಭೂಮಿ", "ಅಗ್ನಿ", "ಜಲ", "ವಾಯು" ಮತ್ತು "ಆಕಾಶ" ಈ ಪಂಚ ಭೂತಗಳಿಗೆ ಒಂದೊಂದು ದೇವ್ರಿದೆ. ಇಲ್ಲಿಯ ಅಣ್ನಾಮಲೈ ಸ್ವಾಮಿ "ಅಗ್ನಿ"ಯನ್ನು ಪ್ರತಿನಿಧಿಸುವ ದೇವ್ರು. ಇಲ್ಲಿನ ಕಾರ್ತೀಕ ಮಾಸದ ದೀಪೋತ್ಸವ ಭಾಳ ಫೇಮಸ್ಸು.

ಇಲ್ಲಿಗೆ ತಲುಪುವುದು ಬಲು ಸುಲಭ! ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಪ್ರತಿ ಬೆಳಗೂ ೧೫ ನಿಮಿಷಕ್ಕೊಂದರಂತೆ ತಮಿಳ್ನಾಡು ಸರ್ಕಾರಿ ಬಸ್ಸುಗಳು ತಿರುವಣ್ಣಾಮಲೈಗೆ ಪಯಣಿಸುತ್ತವೆ. ಆಗೊಮ್ಮೆ-ಈಗೊಮ್ಮೆ ಕೇಎಸ್ಸಾರ್ಟೀಸಿ ಕೂಡ ಲಭ್ಯವಿದೆ.

No comments: